Tuesday, November 2, 2010

ಸಾನ್ವಿಯ ಹ್ಯಾಲೋವಿನ್

ಕುಂಬಳಕಾಯಿಯ ಹಿಡಿಕೆಯ ಸುತ್ತ ವರ್ತುಲಾಕಾರದಲ್ಲಿ ಕೊಯ್ದು ಎಳೆದಾಗ, ಅದು ಚಿಕ್ಕ ಮುಚ್ಚಳಿಕೆಯ ತರ ಹೊರಗೆ ಬಂತು. ಅದಕ್ಕೆ ತಿರುಳಿನಿಂದ ಅಂಟಿಕೊಂಡಿದ್ದ ಬೀಜದ ಸರಮಾಲೆಗಳು. ಕುಂಬಳಕಾಯಿಯೊಳಗೆ ಸೌಟಿನಿಂದ ಎರೆದು ತಿರುಳು-ಬೀಜಗಳನ್ನು ತೆಗೆದದ್ದಾಯಿತು.

ಕುಂಬಳಕಾಯಿ ಹೊರಮೈಯ ಮೇಲೆ ಎರಡು ತ್ರಿಕೋನಕಾರದಲ್ಲಿ ಕಣ್ಣುಗಳಂತೆ ಕೊರೆದು, ನಡುವೆ ಇನ್ನೊಂದು ತ್ರಿಕೋನದಂತ ಮೂಗನು ಕೊರೆದದ್ದಾಯಿತು. ಮೂಗಿನ ಕೆಳಗೆ ಬಾಯಿ ಆಕಾರದಲ್ಲಿ ಕೊರೆದಾಗ, ಅಲ್ಲೊಂದು ಮುಖ ಕುಂಬಳಕಾಯಿಯ ಮೇಲೆ ಮೂಡಿತ್ತು.

ಸಾನ್ವಿ ತನ್ನ ಬೌನ್ಸರ್‍ನಲ್ಲಿ ಕುಳಿತು, ತನ್ನ ಮುಂದೆ ನಡೆಯುತಿದ್ದ ಕುಂಬಳಕಾಯಿ ಕೆತ್ತನೆ ಕಡೆ ನೋಡುತ್ತಿದ್ದಳು..

ಹ್ಯಾಲೋವಿನ್ ಎಂಬ ವಿಶಿಷ್ಟ ಆಚರಣೆಗೆ ಸಿದ್ಧತೆ ನಡೆದಿತ್ತು..

ಕಣ್ಣು-ಮೂಗು-ಬಾಯಿಗಳನ್ನು ಇನ್ನೊಮ್ಮೆ ತೀಡಿ, ಅದರೊಳಗೆ ಮೇಣದ ಬತ್ತಿ ಇಟ್ಟಾಗ, ಕುಂಬಳಕಾಯಿಗೆ ಜೀವ ಬಂದಂತಿತ್ತು.
ಅದರ ತಲೆಯ ಮೇಲೆ ಮುಚ್ಚಳದಂತ ಚಿಪ್ಪನ್ನು ಇಟ್ಟಾಗ, ಜಾಕ್-ಓ-ಲ್ಯಾಂಟ್ರನ್(Jack O' Lantern) ಸಿದ್ಧವಾಗಿತ್ತು.

ಹ್ಯಾಲೋವಿನ್ ಆಚರಣೆಯಲ್ಲಿ ಜಾಕ್-ಓ-ಲ್ಯಾಂಟ್ರನ್ ಒಂದು ಪ್ರಮುಖ ಭಾಗ. ಕುಂಬಳಕಾಯಿಯಲ್ಲಿ ಮುಖವನ್ನು(ಬಹುತೇಕ ಕಡೆಗಳಲ್ಲಿ ಭಯಾನಕ ಮುಖ) ಕೊರೆದು ಅದರಲ್ಲಿ ದೀಪ ಹಚ್ಚಿ ಮನೆಯೊರಗೆ ಇಟ್ಟರೆ, ಅದು ದುಷ್ಟ ಶಕ್ತಿಗಳನ್ನು ಮನೆಯಿಂದ ದೂರವಿಡುತ್ತೆಂಬ ಪ್ರತೀತಿ.

ಜಾಕ್-ಓ-ಲ್ಯಾಂಟ್ರನ್ ಮನೆಯ ಬಾಗಿಲಲ್ಲಿ ಸ್ಥಾಪಿಸಿ ಬಂದಾಗ, ಸಾನ್ವಿಯನ್ನು ಅವರ ಅಮ್ಮ ಹ್ಯಾಲೋವಿನ್ ಡ್ರೆಸ್‍ನಲ್ಲಿ ಅಲಂಕರಿಸುತ್ತಿದ್ದಳು.

ಹ್ಯಾಲೋವಿನ್ ದಿನದಂದು ವಿವಿಧ ತರದ ಫ್ಯಾನ್ಸಿ ಡ್ರೆಸ್‍ಗಳನ್ನು ತೊಡುವುದು ಒಂದು ಸಂಪ್ರದಾಯವಾಗಿ ಬಿಟ್ಟಿದೆ. ಮಕ್ಕಳಿಗೆ ಶಾಲೆಗಳಲ್ಲಿ ಹ್ಯಾಲೋವಿನ್ ಡ್ರೆಸ್ ಡೇ ಸಹ ಇರುತ್ತೆ. ಬಾಲಕರಲ್ಲಿ ಸುಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಐರನ್ ಮ್ಯಾನ್, ಪೋಲಿಸ್, ಸ್ಟಾರ್ ವಾರ್ಸ್ ಡ್ರೆಸ್‍ಗಳು ತುಂಬಾ ಪ್ರಸಿದ್ಧಿ. ಬಾಲಕಿಯರಲ್ಲಿ ಯುವರಾಣಿ, ಕಿನ್ನರಿ, ಸುಪರ್ ಗರ್ಲ್ ಬೇಡಿಕೆಯವು.
ದೊಡ್ಡವರದು ಬೇರೆಯದೇ ಒಂದು ವಿಚಿತ್ರ ಡ್ರೆಸ್ ಲೋಕ.

ನಮ್ಮ ಸಾನ್ವಿಗೆ ಹ್ಯಾಲೋವಿನ್‍ಗೆ ’ಹಸಿರು ಬಟಾಣಿ ಕಾಯಿ’ (Pea in the Pod) ಡ್ರೆಸ್ ಹಾಕಿದ್ದೆವು.

ಬಿಡಿಸಿದ ಬಟಾಣಿಕಾಯಿ ನಡುವೆ ಹಸಿರು ಬಟಾಣಿ ಕಾಳುಗಳ ವಸ್ತ್ರ. ತಲೆಗೆ ಬಟಾಣಿಕಾಯಿ ತೊಟ್ಟಿನಂತ ಹಸಿರು ಟೋಪಿ. ಟೋಪಿಗೊಂದು ಚಿಕ್ಕ ಹಸಿರು ಎಲೆ.

ಸಾನ್ವಿ ಥೇಟ್ ಹಸಿರು ಬಟಾಣಿ ಕಾಯಿ ತರನೇ ಮುದ್ದಾಗಿ ಕಾಣುತ್ತಿದ್ದಳು.

ಬಟಾಣಿ ಪುಟಾಣಿ ಸಾನ್ವಿ ’ಟ್ರಿಕ್ ಆರ್ ಟ್ರೀಟ್’ (Trick or Treat) ಹೊರಟಿತ್ತು.

ಹ್ಯಾಲೋವಿನ್ ಡ್ರೆಸ್‍ ಧರಿಸಿದ ಮಕ್ಕಳು ಅಕ್ಕಪಕ್ಕದ ಮನೆಗಳಿಗೆ ಹೋಗಿ, ಬಾಗಿಲು ಬಡಿದು ’ಟ್ರಿಕ್ ಆರ್ ಟ್ರೀಟ್’ ಎಂದು ಕೇಳುತ್ತಾರೆ. ಮನೆಯವರು ಟ್ರೀಟ್ ಎಂದು ಉತ್ತರಿಸಿ ಚಾಕೋಲೇಟ್-ಕ್ಯಾಂಡಿಗಳನ್ನು ಮಕ್ಕಳಿಗೆ ಕೊಡುತ್ತಾರೆ. ಬಹುಷಃ ಯಾರೂ ಟ್ರಿಕ್ ಎನ್ನುವುದಿಲ್ಲ. ಟ್ರೀಟ್ ಕೊಡದಿದ್ದರೆ ಮಕ್ಕಳು ಮಾಡುವ ತರಲೆಗಳಿಗೆ ಟ್ರಿಕ್ ಎನ್ನುತ್ತಾರೆ.

ಸಾನ್ವಿ ಬಟಾಣಿ ಡ್ರೆಸ್‍ನಲ್ಲಿ ’ಟ್ರಿಕ್ ಆರ್ ಟ್ರೀಟ್’ ಹೊರಟಾಗ, ಅಪ್ಪ-ಅಮ್ಮ ಚಾಕೋಲೇಟ್ ಬಕೆಟ್ ಹಿಡಿದು ಹಿಂಬಾಲಿಸಿದೆವು.
ಅಪ್ಪ-ಅಮ್ಮನ ಸ್ನೇಹಿತರಾದ ದೀಪ್ತಿ ಮನೆಗೆ ಹೋಗಿ ಕೇಳಿದಾಗ, ಸಾನ್ವಿಗೆ ಟ್ರೀಟ್ ಸಿಕ್ಕಿತು. ಸಾಕಷ್ಟು ಚಾಕೋಲೇಟ್‍ಗಳು ಬಕೆಟ್ ತುಂಬಿದವು.

ಸಾನ್ವಿ ಖುಷ್ ! ಕತೆ ಹೇಳೋ ತರ ಸ್ವರ ಹೊರಡಿಸಿ, ನಗುತ್ತಾ ಇದ್ದಳು ಸಾನ್ವಿ. ಬಹಳಷ್ಟು ಚಾಕೋಲೇಟ್‍ಗಳು ಸಿಕ್ಕಿವೆ ಎಂದು ಗೊತ್ತಾಯಿತೋ ಏನೋ..

ಸಂಚಾರ ಮುಗಿಸಿ ಮನೆಗ ಮರಳಿದಾಗ, ಜಾಕ್-ಓ-ಲ್ಯಾಂಟ್ರನ್ ನಗುತ್ತಾ ಸಾನ್ವಿಗೆ ಸ್ವಾಗತ ಬಯಸಿತ್ತು.

ಹೀಗೆ ನಡೆದಿತ್ತು ಸಾನ್ವಿಯ ಹ್ಯಾಲೋವಿನ್ !

14 comments:

 1. Appa Amma;Sanvi's Halovin Day outing was great.It is so nice that you share all these little things with us!The real joy in life is in sharing!
  ಬಟಾಣಿಯ ಡ್ರೆಸ್ ನಲ್ಲಿ ಪುಟಾಣಿ ಸಾನ್ವಿ ಮುದ್ದಾಗಿತ್ತು.

  ReplyDelete
 2. sanvi's Halovin Day outing its very nice... green dress with baTaaNiyalli cute agiddale.. so so cute...

  ReplyDelete
 3. ಕೃಷ್ಣಮೂರ್ತಿ ಸರ್,
  ಜೀವನದ ಸಂತಸಗಳನ್ನು ಅಳೆಯುವುದು ಚಿಕ್ಕ ಚಿಕ್ಕ ಹೆಜ್ಜೆಗಳಿಂದಂತೆ..
  ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

  ReplyDelete
 4. ತರುಣ್,
  ನಿಮ್ಮ ಪ್ರೀತಿಗೆ ವಂದನೆಗಳು

  ReplyDelete
 5. ಬಾಲು ಅವರೇ,
  ಧನ್ಯವಾದಗಳು

  ReplyDelete
 6. ಬಟಾಣಿ ಕಾಳಿನ ವೇಷದಲ್ಲಿ ಸಾನ್ವಿಯ ಚೆ೦ದದ ಫೋಟೊ ನೋಡಿ ಖುಶಿಯಾಯ್ತು.
  nice article.

  ReplyDelete
 7. ಮನಮುಕ್ತಾ,
  ನಿಮ್ಮ ಮೆಚ್ಚುಗೆಯ ನುಡಿಗೆ ಧನ್ಯವಾದಗಳು.

  ReplyDelete
 8. ಎಳೆ ಎಳೆಯಾಗಿ ಬಿಡಿಸಿಟ್ಟ ಸಾನ್ವಿ ನೆನಪುಗಳ ಲೋಕಕ್ಕೆ ಧನ್ಯವಾದಗಳು .ಸಾನ್ವಿ ನೋಡ್ತಾ ಇದ್ದರೆ ನೋಡ್ತಾನೆ ಇರೋಣ ಅನ್ನಿಸುತ್ತೆ ಶಿಲ್ಪಾ,ಬಟಾಣಿ ಕಾಳಿನ ವೇಷದಲ್ಲಿ ಸಾನ್ವಿಯ ಚೆ೦ದದ ಫೋಟೊ ನೋಡಿ ಖುಶಿಯಾಯ್ತು. ಮರೆಯಲಾರದ ಸಾನ್ವಿಯ ನೆನಪುಗಳೊಂದಿಗೆ .....

  ReplyDelete
 9. ಕವಿತ ಮಹೇಶ್,
  ನಿಮ್ಮ ಪ್ರೀತಿಭರಿತ ಮೆಚ್ಚುಗೆಯ ಸಾಲುಗಳಿಗೆ ವಂದನೆಗಳು.
  ಬಟಾಣಿ ವೇಷ ನಿಮಗೂ ಇಷ್ಟವಾಗಿದ್ದು ಕೇಳಿ ಸಂತೋಷವಾಯ್ತು.

  ಪ್ರೀತಿಯೊಂದಿಗೆ

  ReplyDelete
 10. ಸಾನ್ವಿಯ ಹ್ಯಾಲೋವಿನ್ ಚೆನ್ನಾಗಿ ಮೂಡಿ ಬ೦ದಿದೆ.ಮುದ್ದಾದ ಭಾವಚಿತ್ರ ಆಕರ್ಷಕವಾಗಿದೆ.

  ReplyDelete
 11. ನಿಮ್ಮ ಮನೆಯ ಪುಟಾಣಿ ಬಟಾಣಿ ಭಲೇ ಮುದ್ದಾಗಿದ್ದಾಳೆ:) ನಮ್ಮ ಪುಟ್ಟಿಯ ಹ್ಯಾಲೋವೀನ್ ಆಟಗಳನ್ನೂ ಒಮ್ಮೆ ನೋಡಿ..
  http://puttiprapancha.blogspot.com/search/label/halloween

  ReplyDelete
 12. ಮುಳಿಯಾಲ ಅವರೇ,
  ಧನ್ಯವಾದಗಳು !

  ReplyDelete
 13. ಪುಟ್ಟಿಯ ಅಮ್ಮ,
  ವಂದನೆಗಳು..
  ಖಂಡಿತ ಪುಟ್ಟಿಯ ಹ್ಯಾಲೋವಿನ್ ನೋಡಲು ಬರುತ್ತೀವಿ

  ReplyDelete