ಸಾನ್ವಿಯ ಎಣ್ಣೆ ಮಾಲೀಶ್-ಸ್ನಾನದ ಪ್ರೀತಿ ಬಗ್ಗೆ ಹಿಂದೆ ಹೇಳಿದ್ದೆ. ಸಾನ್ವಿಗೆ ದಿನ ಹೀಗೆ ಎಣ್ಣೆ-ಸ್ನಾನ ಮಾಡಿಸೋರು ಅವರ ಮುತ್ತಜ್ಜಿ !
ಸಾನ್ವಿ ಅಮ್ಮನನ್ನು ಎತ್ತಿ ಬೆಳಿಸಿದ ಕೈಗಳು ಈಗ ಸಾನ್ವಿಯನ್ನು ಎತ್ತಿ ಆಡಿಸುತ್ತಿರುವುದು ಒಂದು ಭಾಗ್ಯವೇ..
ವೀಸಾ, ಮೊದಲ ಬಾರಿ ವಿಮಾನ ಪ್ರಯಾಣ, ಎರ್ ಪೋರ್ಟ್, ತಪಾಸಣೆ ಇತ್ಯಾದಿಗಳನ್ನು ಅರಿಗಿಸಿಕೊಂಡು, ಅವರು ಭಾರತದಿಂದ ಇಲ್ಲಿಗೆ ಪಯಣಿಸಿದ್ದೇ ಒಂದು ಕತೆ.
ನಾಲ್ಕು ವರ್ಷದ ಹಿಂದಿನ ಮಾತು, ಹುಡುಗಿ ನೋಡಲು ಸಾನ್ವಿ ಅಮ್ಮನ ಮನೆಗೆ ಹೋಗಿದ್ದೆ. ಉಭಯ ಕುಶಲೋಪರಿಯ ನಂತರ ಬಂದವರು ಇವರು. ಇವರನ್ನು ನೋಡಿದ ಮೇಲೆ, ಬಹುಷಃ ಇವರು ಹುಡುಗಿಯ ತಾಯಿ ಇಲ್ಲಾ ದೊಡ್ಡಮ್ಮ ಇರಬಹುದು ಎಂದು ನನ್ನ ಊಹೆಯಾಗಿತ್ತು. ಸ್ಪಲ್ಪ ಸಮಯದ ನಂತರ ನನಗೆ ತಿಳಿದದ್ದು ಅವರು ಹುಡುಗಿಯ ಅಜ್ಜಿ ! ನಂತರ ತುಂಬಾ ಸಲ ಸಾನ್ವಿ ಅಮ್ಮನ ಜೊತೆ ಮಾತಾಡುವಾಗ, ಅಜ್ಜಿ ಈ ವಯಸ್ಸಿನಲ್ಲೂ ಹಾಗೇ ಕಾಣುವ ರಹಸ್ಯದ ಬಗ್ಗೆ ಕಾಡಿಸಿದ್ದು ಇದೆ.
ಅಜ್ಜಿ ಯಂಗ್ ಅಷ್ಟೇ ಆಗಿರದೇ, ಮನೆ-ಸಂಸಾರವನ್ನು ಬೆಳಸಿದ ಪರಿ ನೆನಪಿಟ್ಟುಕೊಳ್ಳುವಂತದ್ದು. ಅಜ್ಜನ ಶಿಕ್ಷಕ ವೃತ್ತಿಯಿಂದ ಬರುವ ಆದಾಯದಲ್ಲಿ ಮನೆ ತೂಗಿಸಿಕೊಂಡು, ೫ ಜನ ಮಕ್ಕಳನ್ನು ಓದಿಸಿ, ಎಲ್ಲರೂ ಮಾಸ್ಟರ್ ಡಿಗ್ರಿ ತೆಗೆದುಕೊಂಡು(ಇಬ್ಬರೂ ಪುತ್ರರು ಪಿ.ಹೆಚ್.ಡಿ ಸಹ ಮಾಡಿ) ಜೀವನದಲ್ಲಿ ನೆಲೆ ಕಂಡುಕೊಳ್ಳುವುದು ಸಾಮಾನ್ಯ ಮಾತಲ್ಲ.
ಅಂತಹ ಅಜ್ಜಿ ನಮ್ಮಲ್ಲಿಗೆ ಬಂದಾಗ ನಮಗೆ ಸಂತೋಷವೇ ಆಗಿತ್ತು, ಜೊತೆಗೆ ಅಜ್ಜಿ ಇಲ್ಲಿನ ಜೀವನಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆಂದು ಸ್ಪಲ್ಪ ಯೋಚನೆಯಿತ್ತು. ಆ ಎಲ್ಲಾ ಯೋಚನೆಗಳನ್ನು ಕೆಲವೇ ದಿನಗಳಲ್ಲಿ ಕೊಡವಿಕೊಳ್ಳುವಂತೆ ಮಾಡಿಬಿಟ್ಟರು ಅಜ್ಜಿ. ಅವರ ವಿಶೇಷ ಇರುವುದೇ ಹೊಂದಿಕೊಳ್ಳುವ ಸ್ವಭಾವದಲ್ಲಿ..
ಸಾನ್ವಿ ಅಮ್ಮನ ಹೂ ಮುಡಿಸುವ ಕಾರ್ಯಕ್ರಮ ನಡೆಸಿದಾಗ, ಒಂದೂ ಬಿಡದೆ ಆಚಾರ-ಪದ್ಧತಿಗಳನ್ನು ಮಾಡಿ, ಬಂದವರಿಗೆ ಹೋಳಿಗೆ ಊಟ ಹಾಕಿ, ಎಲ್ಲಾ ಸುಸಾಂಗತ್ಯವಾಗಿ ನಡೆಸಿಕೊಟ್ಟಿದ್ದರು.
ನಂತರ ಸಾನ್ವಿ ಅಮ್ಮ ಅಸೆ ಪಡುವ ಅಕ್ಕಿ ರೊಟ್ಟಿ, ರಾಗಿ ಕಿಲ್ಸಾ, ರವೆ ಪಾಯಸಗಳು ನಮ್ಮ ಅಡುಗೆ ಮನೆಯಲ್ಲಿ ದಿನವು ಸುವಾಸನೆ ಬೀರತೊಡಗಿದ್ದವು.
ಇಲ್ಲಿಗೆ ಬಂದ ಮೇಲೆ ಅಜ್ಜಿ ಅಕ್ಕಪಕ್ಕದಲ್ಲಿ ಸ್ನೇಹಿತರನ್ನು ಮಾಡಿಕೊಂಡದ್ದು ಇದೆ. ಪಕ್ಕದ ಮನೆಯ ಅಮೇರಿಕನ್ ಸಿಕ್ಕಿದಾಗ ಇವರಿಗೆ ಇಂಗ್ಲೀಷ್‍ನಲ್ಲಿ ಎನೋ ಹೇಳಿದಂತೆ, ಇವರು ಅವನಿಗೆ ’ನಾವು ಕನ್ನಡದವರು’ ಅಂದರಂತೆ. ಅವನಿಗೆ ಅದು ಕೆನಡಾ ಅಂದು ಕೇಳಿಸಿ, ’I have been to Canada’ ಅಂದನಂತೆ. ಅವನ ಕಣ್ಣಿನಲ್ಲಿ ಅಜ್ಜಿ ಕೆನಡಾದಿಂದ ಬಂದಿದೆ !
ಹಾಗೇ ಮೇಲಿನ ಮನೆಯ ಇನ್ನೊಂದು ಭಾರತೀಯ ಕುಟುಂಬವೊಂದು ಅವರ ಮನೆಯಲ್ಲಿ ತುಂಬಾ ಅಳುತ್ತಿದ್ದ ಮಗುವಿಗೆ ಎನು ಮಾಡಬೇಕೆಂದು ಅಜ್ಜಿಗೆ ಕೇಳಿದರು. ಅಜ್ಜಿ ಅವರ ಮನೆಗೆ ಹೋಗಿ ಮಗುವನ್ನು ಸಮಾಧಾನ ಮಾಡಿಕೊಟ್ಟು ಬಂದಿದ್ದಾರೆ.
ಇನ್ನು ನಮ್ಮ ಅಪಾರ್ಟ್‍ಮೆಂಟ್ ರಿಪೇರಿ ಕೆಲಸ ನೋಡಿಕೊಳ್ಳುವ ರಾಬರ್ಟೋ ಎನ್ನುವ ಮೆಕ್ಸಿಕನ್, ನಮ್ಮ ಮನೆಗೆ ಯಾವುದೋ ರಿಪೇರಿಗೆಂದು ಬಂದಿದ್ದ. ಆಗ ಅಜ್ಜಿ ಅವನಿಗೆ ಕಣ್ಣನ್‍ದೇವನ್ ಟೀ ಮಾಡಿಕೊಟ್ಟಿದ್ದರು. ಬಹುಷಃ ಮೊದಲ ಸಲ ಈ ರೀತಿ ಉಪಚಾರ ಕಂಡು ರಾಬರ್ಟೋ ತುಂಬಾ ಖುಶ್. ಅದು ಕೆಟ್ಟಿದೆ-ಇದು ಕೆಲಸ ಮಾಡ್ತಿಲ್ಲ-ಯಾವಾಗ ರಿಪೇರಿ-ಇನ್ನೂ ಎಷ್ಟೊತ್ತು ಅನ್ನುವ ಜನರ ಮಧ್ಯೆ ಅಜ್ಜಿ ಅವನಿಗೆ ವಿಭಿನ್ನವಾಗಿ ಕಂಡಿರಬಹುದು.
ಆಸ್ಪತ್ರೆಯಲ್ಲಿ ಸಾನ್ವಿ ಜನಿಸಿದಾಗ ವೈದ್ಯರು-ನರ್ಸ್ ಇವರು ಸಾನ್ವಿಯ ಮುತ್ತಜ್ಜಿ ಎಂದು ತಿಳಿದಿದ್ದೆ ಪರಮಾಶ್ಚರ್ಯಗೊಂಡಿದ್ದರು. ’She looks so young to be great-grand mother' ಎನ್ನುವುದು ಸಾಮಾನ್ಯ ಉದ್ಗಾರವಾಗಿಬಿಟ್ಟಿತ್ತು!
ಸಾನ್ವಿ ಜನಿಸಿದ ಮೇಲೆ ಹೆಚ್ಚಿಗೆ ಆದ ಮುತ್ತಜ್ಜಿಯ ಕೆಲಸ- ದೃಷ್ಟಿ ತೆಗೆಯುವುದು! ದೃಷ್ಟಿ ತೆಗೆಯುವಾಗಲೂ ಇಷ್ಟೊಂದು ರೀತಿಗಳಿವೆ ಎಂಬುದನ್ನು ಇವರು ಮಾಡುವುದನ್ನು ನೋಡಿದ ಮೇಲೆ ಗೊತ್ತಾಗಿದ್ದು.
ಸಾನ್ವಿಯ ಸ್ನಾನ ಮಾಡಿಸುವಾಗ ಅತ್ಯಂತ ಜಾಗರೂಕತೆಯಿಂದ-ಅಷ್ಟೇ ಪ್ರೀತಿಯಿಂದ ನೀರೆರವುದು ನೋಡುವುದು ಸೊಗಸು. ಸಾನ್ವಿ ಪ್ರತಿ ನಡೆಯನ್ನು ಗಮನಿಸುತ್ತಾ ಕೆಲವೊಮ್ಮೆ ಯಾಕೇ ಅಳುತ್ತಿರುವುದೋ- ಎನು ತೊಂದರೆಯೋ ಎನ್ನುವ ಆತಂಕ ಎದುರಾದಾಗ, ತಮ್ಮ ಅನುಭವದ ನುಡಿಗಳನ್ನು ಹೇಳಿದ್ದು ಅಜ್ಜಿ.
ಮೊನ್ನೆ ಗಣೇಶ ಚೌತಿಯಂದು ಅದೆಲ್ಲಿಂದಲೋ ಒಂದು ಗರಿಕೆಯನ್ನು ತೆಗೆದುಕೊಂಡು ಬಂದು ಬೆನಕನನ್ನು ಮಾಡಿದ್ದರು.ಸಾನ್ವಿ ಮತ್ತು ಮುತ್ತಜ್ಜಿ ಕಮಲಮ್ಮ, ಗೌರಿ-ಗಣಪನ ಮುಂದೆ ಹಾಡಿದ
ವಿಡಿಯೋ ಇಲ್ಲಿದೆ. ಹಾಡಿನ ಮಧ್ಯದಲ್ಲಿ ಸಾನ್ವಿ ಅಳುವ ರಾಗದ ಆಲಾಪವೂ ಇದೆ !
ಅಜ್ಜ-ಅಜ್ಜಿಯ ಕೈಯಲ್ಲಿ ಆಡುವುದು ಎಷ್ಟು ಚೆನ್ನಾ..ಅದರಲ್ಲೂ ಮುತ್ತಜ್ಜಿ..
ಸಾನ್ವಿಗೆ ಆ ಅವಕಾಶ ಸಿಕ್ಕಿರುವುದು ವಿಶೇಷವೇ !