ಈಗೀಗ ಎರಡು ಕೈಗಳಲ್ಲಿನ ಕನಿಷ್ಟ ಎರಡು ಬೆರಳುಗಳು ಬಾಯಿಗೆ ಹೋಗುತ್ತಿವೆ. ಅದರ ಜೊತೆ, ಚಪ್ಪರಿಸಿಕೊಂಡು ಬೆರಳು ಚೀಪುವುದು ನಡೆಯುತ್ತಿದೆ.
ಮೊನ್ನೆ ಸೋಫಿ ಎಂಬ ಚಿಕ್ಕ ಜಿರಾಫೆ ಮರಿ ತಗೆದುಕೊಂಡು ಬಂದೆವು. ಸಾನ್ವಿ ತರದ, ಹಲ್ಲು ಮೂಡುವುದಕ್ಕಿಂತ ಮುಂಚಿನ(ಹಲ್ಲು ಮೂಡಿದ) ಮಕ್ಕಳಲ್ಲಿ ತುಂಬಾ ಪ್ರಸಿದ್ಧವಾದದಂತೆ ಈ ಸೋಫಿ. ರಬ್ಬರಿನಿಂದ ಮಾಡಿದ ಸೋಫಿ, ಸಾನ್ವಿ ಕೈ ಬಾಯಲ್ಲಿ ಆಡಿತು.
ಕುವೆಂಪು ’ಬೆರಳ್ಗೆ ಕೊರಳ್’ಲ್ಲಿ ಹೇಳುವ ರೀತಿಯಲ್ಲಿ, ನಮ್ಮ ಸಾನ್ವಿ ‘ಬೆರಳ್ಗಳು ನೂರು ಮಡಿ ಲೇಸು, ರಬ್ಬರಿನ ಆ ನಮ್ಮ ಸೂಫಿಗಿಂ’ ಎಂಬಂತೆ ಕೆಲವೇ ದಿನಗಳಲ್ಲಿ ಮರಳಿ ತನ್ನ ಬೆರಳಿಗೆ ಮರಳಿದಳು !
ಇದರ ಜೊತೆಗೆ ಸಿರಿಲ್ ತಿನ್ನಿಸುವಾಗ ಚಮಚ ಕಚ್ಚುವುದು, ಕುತ್ತಿಗೆ ಸುತ್ತಲಿನ ವಸ್ತ್ರ ಎಳೆದು ಬಾಯಿಗೆ ಹಾಕಿಕೊಳ್ಳುವುದು ಮುಂದುವರೆದಿದೆ.
ಇದಿಷ್ಟು ಸಾನ್ವಿಯ ಬೆರಳುಗಳ ಕತೆಯಾದರೆ, ನಮ್ಮಗಳ ಬೆರಳುಗಳು ಸಾನ್ವಿಗೆ ವಿಸ್ಮಯವುಂಟು ಮಾಡುವ ಆಟಿಕೆಗಳು.
ನಮ್ಮ ಕೈ ಬೆರಳುಗಳನ್ನು ಸಾನ್ವಿ ಮುಂದೆ ಆಡಿಸುತ್ತಿದ್ದರೆ, ಅದನ್ನು ತದೇಕಚಿತ್ತದಿಂದ ನೋಡುತ್ತಿರುತ್ತಾಳೆ. ಬೆರಳುಗಳು ಹೇಗೆ ಓಡಾಡುತ್ತವೆಯೋ, ಹಾಗೇ ಸಾನ್ವಿಯ ದೃಷ್ಟಿ ಹಿಂಬಾಲಿಸುತ್ತದೆ. ಮುಖದಿಂದ ಎಷ್ಟು ದೂರ ಬೆರಳುಗಳನ್ನು ತೆಗೆದುಕೊಂಡು ಹೋದರು, ಅದನ್ನೇ ನೋಡುತ್ತಿರುತ್ತಾಳೆ.ನಮ್ಮ ಬೆರಳುಗಳ ಕೈಗೆ ಸಿಗುತ್ತಿದ್ದರೆ, ಮತ್ತೆ ಆ ಬೆರಳುಗಳನ್ನು ಬಾಯಿಗೆ ಎಳೆದುಕೊಂಡು ಹೋಗುವ ಉತ್ಸಾಹ. ಕೆಲವೊಮ್ಮೆ ಒಂದರ ಬದಲಾಗಿ ಎರಡು ಕೈಗಳನ್ನು ಹಿಡಿದಾಗ, ಯಾವ ಬೆರಳುಗಳನ್ನು ಹಿಂಬಾಲಿಸಬೇಕೆಂಬ ಜಿಜ್ಞಾಸೆ !
ಪುಟ್ಟ ಮಕ್ಕಳು ಬೆರಳು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಅವಕ್ಕೆ ಸಮಾಧಾನ ಆಗುತ್ತದೆಯಂತೆ, ಹಾಗೇ ಹಲ್ಲು ಬರುವದಕ್ಕಿಂತ ಮುಂಚೆ ಬೆರಳು ಚೀಪುವುದು ಜಾಸ್ತಿಯಾಗುತ್ತದೆ ಎಂದು ಸಾನ್ವಿಯ ಅಜ್ಜಿ ತಮ್ಮ ಬೆರಳು ತೋರಿಸಿ ಹೇಳುವಾಗ, ಸಾನ್ವಿ ದೃಷ್ಟಿ ಅವರ ಬೆರಳುಗಳೇ ಮೇಲೆ ಇತ್ತು !