ಪಪ್ಪಾ ...
ಕೇಕು ಆರಿಸುವಾಗ ಪೈನಾಪಲ್ ಕೇಕು ಬೇಕು ಅಂತಾ ತಾನೇ ಆರಿಸಿಕೊಂಡಳು.ಹುಟ್ಟು ಹಬ್ಬದ ಆಚರಣೆಯಲ್ಲಿ ಸಂಭ್ರಮಿಸಿದ ಪರಿ. ಹೊಸ ಬಟ್ಟೆಯುಟ್ಟು ನಲಿದ ಬಗೆ.
ಆಫೀಸಿನಿಂದ ಮರಳುವಾಗ ಮಲಗುವ ಹಂತದಲ್ಲಿದ್ದಳು. ನೋಡಿದ ಕೂಡಲೇ ಪಪ್ಪಾ ಆಫೀಸ್ ಅಲ್ಲಿ ಆಪಲ್
ತಿಂದಿರ ಅಂದಳು.
ದೂರದಲ್ಲಿ ಕರೆದ ಹಾಗಿತ್ತು.
ಮತ್ತೆ ಪಪ್ಪಾ ..
ಕಣ್ಣು ಬಿಟ್ಟು ನೋಡಿದೆ, ಸಾನ್ವಿ ನಿಂತಿದ್ದಳು. ಸನ್ ಬಂದಿದೆ ಅಪ್ ಪಪ್ಪಾ ಅಂತ ಎಬ್ಬಿಸಿ ಹೋದಳು.
ಮೆಟ್ಟಿಲುಗಳನ್ನು ಪುಟ್ಟ ಹೆಜ್ಜೆ ಇಟ್ಟು ಇಳಿಯುತ್ತಿದ್ದಳು.
ಸುಮ್ಮನೆ ಕಣ್ಮುಚ್ಚಿ ಒರಗಿದೆ. ಕಣ್ಮುಂದೆ ನೆನಪಿನ ಮೆರವಣಿಗೆ..
ಹುಟ್ಟಿ ಕೆಲವು ನಿಮಿಷಗಳಾಗಿತ್ತು. ನನ್ನ ತೋಳಿನಲ್ಲಿದ್ದ ಕಿನ್ನರಿ ಮಗು ನನ್ನನ್ನೇ ಮೊದಲ ಸಲ ನೋಡುತ್ತಿತ್ತು.
ಅಮ್ಮನ ಹೊಟ್ಟೆಯಲ್ಲಿದ್ದಾಗ ಮಾತಾಡಿಸುತ್ತಿದ್ದವರು ಇವರೇನಾ ಅನ್ನುವ ಹಾಗಿದ್ದ ನೋಟ.
ಅಲ್ಲಿಂದ ಮುಂದೆ ದೊಡ್ಡ ಪಾದರಕ್ಷೆಗಳನ್ನು ತನ್ನ ಪುಟ್ಟ ಪಾದದಡಿಯಲ್ಲಿ ಹಿಡಿದಿಡುವ ಪ್ರಯತ್ನ.
ಪಪ್ಪಾ ಅಂತಾ ಮೊದಲ ಸಲ ಕರೆದಾಗಿನ ಕ್ಷಣ.
ಮನೆಗೆ ಹಾಕಿದ್ದ ತನ್ನ ಹೆಸರು ತೋರಿಸಿ ಖುಷಿ ಪಡುತ್ತಿದ್ದ ಸ್ನಿಗ್ಧ ನಗೆ.
ಕಾರನ್ನು ನಾನೇ ಚಾಲನೆ ಮಾಡುತ್ತೇನೆ ಎಂದು ಸೀಟಿನಲ್ಲಿ ಕುಳಿತು ಸ್ಟೇರಿಂಗ್ ಹಿಡಿದ ಪುಟ್ಟ ಕೈಗಳು.
ಮೆಟ್ಟಿಲುಗಳ ಮೇಲೆ ಮತ್ತೆ ಗೆಜ್ಜೆಗಳ ನಾದ. ಸಾನ್ವಿ ಮತ್ತೆ ಬಂದು ನಿಂತಿದ್ದಳು.ಪಪ್ಪಾ ಸನ್ ಅಪ್ ಆಗಿದೆ ಎದ್ದೇಳಿ ಪಪ್ಪಾ ಅಂತಾ ಎದೆ ಮೇಲೆ ಹತ್ತಿ ಕುಳಿತಳು.
ಹೇಗೆ ಓಡಿತು ಸಮಯ !
ನಿನ್ನೆ ಇನ್ನು ನಮ್ಮ ತೋಳುಗಳಲ್ಲಿ ಆಡುತಿದ್ದವಳು, ಈಗ ಮನೆ ತುಂಬಾ ಓಡಾಟ. ಹಿಂದೆ ಹಿಂದೆ ಓಡಿ ಹಿಡಿಯುವ ನಮ್ಮ ಪ್ರಯತ್ನ .
ಮಾ ಮಾ, ಪಾ ಪಾ ಎನ್ನುತ್ತಿದ್ದವಳು, ಈಗ ಬಾಯಿ ತುಂಬಾ ಮಾತುಗಳು..
ಎಲ್ಲ ವಿಷಯಗಳೆಡೆಗೆ ಉತ್ಕಟ ಕುತೂಹಲ. ಪ್ರತಿಯೊಂದಕ್ಕೂ ಅದೇನು ಎನ್ನುವ ಪ್ರಶ್ನೆಗಳು..
ನೋಡಿ ನಲಿಯುತ್ತಲೇ ಎರಡು ವರ್ಷ ಸಾನ್ವಿಗೆ !
ಆಫೀಸಿಗೆ ಹೊರಟು ನಿಂತಿದ್ದೆ. ಎಂದಿನಂತೆ ಟಾ ಟಾ ಮಾಡಲು ಗೇಟಿಗೆ ಬಂದವಳು, ಮತ್ತೆ ಮನೆಯೊಳಕ್ಕೆ ಓಡಿದಳು.
ಪಪ್ಪಾ ತಗೊಳ್ಳಿ ಆಫೀಸ್ ಆಪಲ್ ತಿನ್ನಿ ಎನ್ನುತ್ತಾ ಸೇಬು ಹಣ್ಣು ಕೈಗಿತ್ತಳು..
ಕಣ್ಣಂಚಿನಲ್ಲಿ ಗೊತ್ತಿಲ್ಲದೇ ಹನಿಗೂಡಿತ್ತು...
ಅಪ್ಪ-ಅಮ್ಮನ ಹೃದಯದ ಅಂತರಾಳದಿಂದ, ನಮ್ಮ ಸಾನ್ವಿಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು..