ಟಾತುಮುಶ್
ಅದು ಯಾಕೇ ಅ ಹಳದಿ-ಕೆಂಪು ವಸ್ತ್ರದ ಆ ಜೋಕರ ತರದ ಗೊಂಬೆಗೆ 'ಟಾತುಮುಶ್ ' ಅನ್ನುತ್ತಾಳೆ ಎನ್ನುವುದು ಗೊತ್ತಿಲ್ಲ. ಆದರೆ ದಾರಿಯಲ್ಲಿ ಅದನ್ನು ನೋಡಿದಾಗಲೆಲ್ಲ ಸಾನ್ವಿ ಅದಕ್ಕೆ ಹಾಯ್ ಮತ್ತು ಟಾಟಾ ಮಾಡದೆ ಬರುವುದಿಲ್ಲ.ಟಾತುಮುಶ್ ಮುಟ್ಟಿ, ಅದರ ಕೈಗೆ ಥ್ಯಾಂಕ್ಸ್ ಕೊಟ್ಟು ಬರಲೇಬೇಕು.
ತಥೆಗಳು
ಮಲಗುವ ಮುನ್ನ ಕೇಳುವುದು 'ತಥೆ ಹೇಳು'. ಕನಿಷ್ಠ ಒಂದು ಅರ್ಧ ಡಜನ್ ಕತೆಗಳನ್ನು ಅವರ ಅಮ್ಮ ಹೇಳಿ ಮಲಗಿಸುವುದು ಪರಿಪಾಠವಾಗಿಬಿಟ್ಟಿದೆ. ಅಂಬಾ-ಹುಲಿ, ಆಮೆ-ಮೊಲ, ಮೊಸಳೆ-ಮಂಗ ಸಾನ್ವಿಗೆ ಕೆಲವೊಂದು ಇಷ್ಟದ ಕತೆಗಳು.
ಪಪ್ಪಾಗೆ
ತಿನ್ನುವುದಕ್ಕೆ ಸಾನ್ವಿಗೆ ಏನಾದರು ಕೊಟ್ಟರೆ 'ಪಪ್ಪಾಗೆ ಕೊಡು' ಎನ್ನುತ್ತಾಳೆ. ದಾಳಿಂಬೆ - ದ್ರಾಕ್ಷಿ ಕೈಯಲ್ಲಿ ಹಿಡಿದು 'ಪಪ್ಪಾ ತಿನ್ನಿ' ಎಂದು ಮುಂದೆ ಹಿಡಿಯುತ್ತಾಳೆ.
ಕೇಕ್
ಕಳೆದ ಕೆಲವು ವಾರಗಳಲ್ಲಿ ಸಾನ್ವಿ ಕನಿಷ್ಠ ೪ ಕೇಕ್ ಕತ್ತರಿಸಿದ್ದಾಳೆ. ಮನೆಯಲ್ಲಿ ನಡೆದ ಹುಟ್ಟುಹಬ್ಬ-ವಾರ್ಷಿಕೋತ್ಸವದ ಕೇಕ್ ಕತ್ತರಿಸುವಾಗ ಸಾನ್ವಿ ಇಲ್ಲದಿದ್ದರೆ ಹೇಗೆ ! ಎಲ್ಲಾ ಕೇಕ್ಗಳನ್ನು ಕತ್ತರಿಸುವಾಗಲು ಸಾನ್ವಿ 'ಹಾಪಿ ಬಟದೆ' ಅಂತಲೇ ಹಾಡಿಕೊಂಡಳು !
ಪುಸ್ತಕಗಳು ಸಾನ್ವಿಗೆ ಇಷ್ಟವಾಗುತ್ತವೆ. ಅಮರಚಿತ್ರಕಥ ಮಾಲಿಕೆಯ ಕೆಲವು ಪುಸ್ತಕಗಳಿವೆ. ಅದರಲ್ಲಿ ಕೃಷ್ಣನ ಕಥಾಸಂಗ್ರಹ ಜಾಸ್ತಿ ಇಷ್ಟ. ಅದರಲ್ಲಿ ರುಕ್ಮಿಣಿ ಉದ್ಯಾನವನದಲ್ಲಿ ಕುಳಿತಿರುವ ಚಿತ್ರವೊಂದಿದೆ. ಅದು ನೋಡಿದಾಗಲೆಲ್ಲಾ ರುಕ್ಮುಣಿ ಚಿಟ್ಟೆ ಪಾರ್ಕ್ ಅಲ್ಲಿ ಅನ್ನುತ್ತಾಳೆ ಸಾನ್ವಿ ! ಬನ್ನೇರುಘಟ್ಟದ ಚಿಟ್ಟೆ ಪಾರ್ಕ್ ಹೋಗಿಬಂದಾಗಿನಿಂದ ಎಲ್ಲಾ ಗಿಡ-ಮರ-ಬಳ್ಳಿಯ ಚಿತ್ರಗಳು ಚಿಟ್ಟೆ ಪಾರ್ಕ್ ತರಾನೆ ಅನಿಸುತಿದೆ ಸಾನ್ವಿಗೆ. ಸಿಂಡ್ರೆಲಾ ಕತೆ ಪುಸ್ತಕ ಇಷ್ಟ.
ಛೋಟಾ ಭೀಮ್
ಪೋಗೋದ ಛೋಟಾ ಭೀಮ್ ಸದ್ಯಕ್ಕೆ ನೆಚ್ಚಿನ ಕಾರ್ಟೂನ್ ಕಾರ್ಯಕ್ರಮ.
ಶಾಮು
ಮೊನ್ನೆ ಚಳಿಯಿತೆಂದು ಸಾನ್ವಿಗೆ ಕಾಲಿಗೆ ಸಾಕ್ಸ್ ಹಾಕಿಕೊಳ್ಳಲು ಹೇಳಿದೆ. ಹಾಕಿಕೊಳ್ಳಲ್ಲಿಕ್ಕೆ ಇಷ್ಟವಿರಲಿಲ್ಲ, ಅಲ್ಲಿಂದ ಓಡಿದಳು. ಅಲ್ಲಿಯೇ ಇದ್ದ ಶಾಮು ಎಂಬ ಶಾರ್ಕ್ ಗೊಂಬೆ ತೋರಿಸಿ, ಸಾಕ್ಸ್ ಹಾಕಿಕೊಳ್ಳದಿದ್ದರೆ ಇದು ನಿನ್ನ ಹಿಂದೆ ಬರುತ್ತೆಂದು ಹೇಳಿದೆ. ಒಂದು ಕಾಲಿಗೆ ಸಾಕ್ಸ್ ಹಾಕುವವರೆಗೆ ಶಾಮು ನೋಡುತ್ತಿದ್ದವಳು, ಚಕ್ಕನೆ ಎದ್ದು, ಕಪಾಟಿನ ಬಾಗಿಲು ತೆಗೆದು ,ಶಾಮು ತೆಗೆದುಕೊಂಡು ಹೋಗಿ ಅದರಲ್ಲಿ ಹಾಕಿ, ಬಾಗಿಲು ಹಾಕಿಬಂದಳು. 'ಶಾಮು ಲಾಕ್ ಪಪ್ಪಾ' ಎಂದು ಹೇಳಿ ಹಾಕಿದ ಸಾಕ್ಸ್ ತೆಗೆದಳು !