Wednesday, April 4, 2012

ಪಾತರಗಿತ್ತಿ ಪಾರ್ಕಿನಲ್ಲಿ


ಹೊರಗೆ ತಿರುಗಾಡುವುದು ಸಾನ್ವಿಗೆ ಬಲು ಇಷ್ಟವಾಗ್ತಿದೆ. ಕಾರಿನಲ್ಲಿ ತಿರುಗೋಕೆ ಯಾವಾಗಲೂ ಸಿದ್ಧ..

ಇತ್ತೀಚಿಗೆ ಬನ್ನೇರುಘಟ್ಟದಲ್ಲಿರುವ ಚಿಟ್ಟೆ ಪಾರ್ಕಿಗೆ ಹೋಗಿದ್ದಿವಿ.

ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲೇ ಇರುವ ಇದರಲ್ಲಿ ಸುಮಾರು ೨೦ ಪ್ರಬೇಧದ ಚಿಟ್ಟೆಗಳು ಇವೆಯಂತೆ. ನಾವು ಹೋದಾಗ ೪-೫ ತರವಷ್ಟೇ ಕಣ್ಣಿಗೆ ಬಿದ್ದವು.

ಸಾನ್ವಿಗೆ ಅಲ್ಲಿ ಹಾರಾಡುತ್ತಿದ್ದ ಬಣ್ಣದ ಚಿಟ್ಟೆ ತೋರಿಸಿದಾಗ , ಕಣ್ಣರಳಿಸಿ ನೋಡಿದಳು. ನಂತರ ಅವುಗಳನ್ನು ಹಿಡಿಯುವ ಪ್ರಯತ್ನವು ಸ್ವಲ್ಪ ಹೊತ್ತು ನಡೆಯಿತು !ಕೊನೆ ಪ್ರಯತ್ನವಾಗಿ ಅವುಗಳನ್ನು ಕೈಮೇಲೆ ಬಂದು ಕುಳಿತುಕೊಳ್ಳುವಂತೆ ಬಾ ಬಾ ಎಂದು ಕರೆದಳು !

ಅಷ್ಟರಲ್ಲಿ ಅಲ್ಲೇ ಹರಿಯುತ್ತಿದ್ದ ತೊರೆಯೊಂದರಲ್ಲಿರುವ ಮೀನುಗಳು ಕಂಡವು. ಚಿಟ್ಟೆ ಹಿಂದಿನ ಓಟ ಬಿಟ್ಟು, ಮೀನುಗಳ ಕಡೆ ಚಿತ್ತ ಹರಿಯಿತು. ಅವುಗಳನ್ನು ಸಾಕಷ್ಟು ಹೊತ್ತು ನೋಡಿ ಹೊರಬಂದಾಗ ಎದುರಿಗೆ ಜಾರಬಂಡಿ-ಜೋಕಾಲಿ. ಅವುಗಳ ಜೊತೆಯೂ ಆಟದ ನಂತರ ಸಾನ್ವಿ ಫುಲ್ ಖುಷ್ !

ಮನೆಗೆ ಮರಳುವಾಗ ಸಾನ್ವಿಗೆ ಇವತ್ತು ಏನು ನೋಡಿದೆ ಇಂದು ಕೇಳಿದಾಗ, ಹೇಳಿದ್ದು ಎರಡೇ..ಒಂದು ಪಿಶ್ ಮತ್ತು ಇನ್ನೊಂದು ಮಂಕಿ !

ಚಿಟ್ಟೆ ಪಾರ್ಕಿನ ಹೊರಗೆ ಮಂಗಗಳ ಚಿಕ್ಕ ಗುಂಪಿದೆ.  ಸಾನ್ವಿಯ ಅಮ್ಮನ ಕೈಯಲ್ಲಿ ಹಣ್ಣಿನ ಡಬ್ಬವೊಂದಿತ್ತು. ಒಂದು ಮಂಗ ಹತ್ತಿರ ಬಂದೊಡನೆ , ಕೈಯಲ್ಲಿದ್ದ ಡಬ್ಬವನ್ನು ಗಾಭರಿಯಿಂದ ಎಸೆದಿದ್ದಳು. ಮಂಗಗಳು ಡಬ್ಬದ ಹಣ್ಣುಗಳನ್ನು ಆರಿಸಿ ತಿಂದವು.

ಇದನ್ನು ನೋಡಿದ ಸಾನ್ವಿ....ಅಮ್ಮ ಹೇಗೆ ಡಬ್ಬ ದಪ್ ಅಂತ ಎಸೆದಳು, ಮಂಕಿ ಹೇಗೆ ಅಪ್ ಎಂದು ಜಂಪ್ ಮಾಡಿ ಡಬ್ಬ ಹಿಡಿಯಿತು, ನಂತರ ಮಂಕಿ ಹೇಗೆ ದ್ರಾಕ್ಷಿ ತಿಂದಿತು ಎಂಬ ಕತೆಯನ್ನು ಮನೆ ಮುಟ್ಟುವರೆಗೆ ಅಭಿನಯದೊಂದಿಗೆ
ಹೇಳುತ್ತಿದ್ದಳು !