ಈ ಸಲ ಚುಚ್ಚುಮದ್ದುಗಳ ನಂತರ ಸಾನ್ವಿ ಅಷ್ಟೇನೂ ಅಳಲಿಲ್ಲ.
ನಾಲ್ಕನೇಯ ತಿಂಗಳ ಚುಚ್ಚುಮದ್ದುಗಳನ್ನು ಸಾನ್ವಿಗೆ ನೀಡಿದ ನಂತರ ವೈದ್ಯರು, ಸಾನ್ವಿಗೆ ನಿಧಾನವಾಗಿ ಘನ ಆಹಾರವನ್ನು ಕೊಡಬಹುದೆಂದು ಸೂಚಿಸಿದ್ದರು.
ವೈದ್ಯರ ಸಲಹೆ ಮೇರೆಗೆ ಸಾನ್ವಿಗೆ ಅಕ್ಕಿ ಸಿರಿಯಲ್‍ನಿಂದ ಘನ ಆಹಾರ ಕೊಡಲು ಶುರುಮಾಡಲು ಸನ್ನದ್ಧರಾದೆವು. ಹುಟ್ಟಿದ ಗಳಿಗೆಯಿಂದ ಕೇವಲ ಎದೆಹಾಲು ಕುಡಿಯುತ್ತಿದ್ದ ಸಾನ್ವಿಗೆ ಬೇರೆ ಆಹಾರ ಕೊಡಬಹುದೆನ್ನುವ ವಿಷಯ ನಮಗೆ ವಿಶೇಷವೆನಿಸಿತ್ತು.
ಇಂತಹ ಸುಸಂದರ್ಭವನ್ನು ವಿಶೇಷವಾದ ಜಾಗವೊಂದರಲ್ಲಿ ಶುರುಮಾಡಬೇಕೆಂಬುದು ಸಾನ್ವಿ ಅಮ್ಮನ ಅಭಿಪ್ರಾಯ. ಪರಮಶಕ್ತಿಯಾದ ಭಗವಂತನ ಆಲಯಕ್ಕಿಂತ ವಿಶೇಷ ಜಾಗ ಬೇರೇನೂ ತೊರಲಿಲ್ಲ.
ಲಿವರ್‌ಮೋರ್‌ನ ಶಿವವಿಷ್ಣು ದೇವಾಲಯದಲ್ಲಿ, ಸಾನ್ವಿಯ ಅಮ್ಮ ಪುಟಾಣಿ ಚಮಚದಿಂದ ಸಿರಿಯಲ್‍ನ್ನು ದಿವ್ಯಸಾನ್ಯಿಧ್ಯದಲ್ಲಿ, ಸಾನ್ವಿಗೆ ತಿನಿಸಿದಳು. ಮೊದಲ ಸಲ ಹಾಲಿಗಿಂತ ಭಿನ್ನವಾದ ರುಚಿಯ ಸಿರಿಯಲ್ ತಿಂದ ಸಾನ್ವಿ ಅದೇನೆಂದು ತಿಳಿಯದೇ ಮುಖ ನೋಡುತ್ತಿದ್ದಳು. ನಂತರ ಚಮಚೆಯಲ್ಲಿ ನೀರಿನ ಸ್ವಾದನೆ ನಡೆಯಿತು.
ಸಧ್ಯಕ್ಕೆ ದಿನಕ್ಕೆ ಒಂದು ಸಲ ಸಿರಿಯಲ್ ಅಸ್ವಾದನೆ ನಡೆಯುತ್ತಿದೆ. ಸಿರಿಯಲ್‍ನ್ನು ಹಾಲಿನಲ್ಲಿ ತೆಳುವಾಗಿ ಕಲೆಸಿ, ಸಾನ್ವಿ ಬಾಯಿಯಲ್ಲಿ ಚಮಚದಲ್ಲಿ ಇಡುತ್ತಿದಂತೆ ಸಾನ್ವಿ ಬಾಯಿ ತೆರೆಯುವುದು ನೋಡುವುದು ಚೆಂದ. ಮೈಮೇಲೆ ಬೀಳಬಾರದಂತೆ ಸಾನ್ವಿಯ ಕುತ್ತಿಗೆಯ ಸುತ್ತ ವಸ್ತ್ರ ಕಟ್ಟಿದ್ದರೂ, ಆ ವಸ್ತ್ರವನ್ನೇ ತನ್ನ ಬಾಯಿಗೆ ಹಾಕಿಕೊಳ್ಳವ ಸನ್ನಹ ಸಾನ್ವಿಯದು. ಕೊನೆಗೆ ಬಾಯಿ ಸುತ್ತಲೂ ಬಿಳಿಯ ಪದರ. ಅದನ್ನು ಒರೆಸಿ, ನೀರು ಕುಡಿಸಿದರೆ ಸಾನ್ವಿಯ ಸಿರಿಲ್ ಕೊನೆಗೊಳ್ಳುತ್ತದೆ.
ಸಾನ್ವಿಗೆ ಅನ್ನಪ್ರಾಶನ ಮಾಡಿಸುವಾಗ ಅದಿ ಶಂಕರಾಚಾರ್ಯರು ರಚಿಸಿದ ಅನ್ನಪೂರ್ಣ ಸ್ತೋತ್ರದ ಕೆಲವು ಸಾಲುಗಳು ನೆನಪಾದವು
ಅನ್ನಪೂರ್ಣೇ ಸದಾಪೂರ್ಣೇ
ಶಂಕರಪ್ರಾಣವಲ್ಲಭೆ |
ಜ್ಞಾನವೈರಾಗ್ಯಾಸಿದ್ಯಾರ್ಥಂ
ಭಿಕ್ಷಾಂ ದೇಹಿ ಚ ಪಾರ್ವತಿ||
ಅದರ ಅನುವಾದ - ಓ ಅನ್ನಪೂರ್ಣೇ, ಯಾವಾಗಲೂ ತುಂಬಿರುವವಳೇ, ಶಿವನ ಸತಿಯೇ, ಜ್ಞಾನ ಮತ್ತು ವೈರಾಗ್ಯ ಪಡೆಯುವಂತೆ ಭಿಕ್ಷೆಯನ್ನು ನೀಡು ಪಾರ್ವತಿಯೇ.
ಸಾನ್ವಿಗೆ ಅನ್ನ ಉಣಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ವಿನಮ್ರ ಪ್ರಾರ್ಥನೆ - ಪ್ರಪಂಚದಲ್ಲಿ ಹಸಿದವರು ಎಲ್ಲೇ ಇರಲಿ , ಯಾರೇ ಇರಲಿ, ಅವರಿಗೆಲ್ಲಾ ಅನ್ನವನ್ನು ನೀಡು.
ಹೊಟ್ಟೆಯ ಹಸಿವಿನ ಜೊತೆ ನಮೆಲ್ಲರ ಜ್ಞಾನದ ಹಸಿವು ನೀಗಲಿ.
