Showing posts with label ಅಡುಗೆ ಮನೆ. Show all posts
Showing posts with label ಅಡುಗೆ ಮನೆ. Show all posts

Sunday, January 30, 2011

ಅಡುಗೆ ಮನೆ


ಒಗ್ಗರಣೆ ಹಾಕುವಾಗ ಚಟಪಟ ಸದ್ದು
ಸೌಟು ಮಾಡುವ ಸೊರಸೊರ ಶಬ್ದ
ಸಾರು ಕುದಿಯುವಾಗ ಕೊತಕೊತ
ಸಾನ್ವಿಗೆ ನೋಡಲು ಬಲು ಇಷ್ಟ

ಮಿಕ್ಸರ್ ತಿರುವಾಗ ಗೊರಗೊರ ಶಬ್ದ
ಒವೆನ್ ಬಿಸಿಯಾಗುವಾಗ ಸರ್‌ಸರ್ ಶಬ್ದ
ಪಾತ್ರೆ ಬಿದ್ದಾಗ ಟಳ್‍ಟಳ್
ಸಾನ್ವಿ ತಟ್ಟನೆ ಬೆದರುವಳು ಇಲ್ಲೇ

ನೀರು ಬೀಳುವ ಸೀಳ್‍ಸೀಳ್ ಸದ್ದು
ತರಕಾರಿ ಹೆಚ್ಚುವಾಗ ಕಟ್‍ಕಟ್ ಶಬ್ದ
ಬೇಳೆ ಹಾಕುವಾಗ ಟಕ್‍ಟಕ್
ಸಾನ್ವಿಗೆ ಕೇಳಲು ಬಲು ಇಷ್ಟ

ಚಪಾತಿ ಉದ್ದುವಾಗ ಲೊಟಲೊಟ ಸದ್ದು
ದೋಸೆ ಹೊಯ್ಯುವಾಗ ಚುಯ್‍ಚುಯ್ ಶಬ್ದ
ಏಳುವ ಬಿಸಿಬಿಸಿ ಹೊಗೆ
ಸಾನ್ವಿ ಕಣ್ಣು ಅರಳುವ ಬಗೆ

ಅಡುಗೆ ಮನೆಯ ನೋಟ ಶಬ್ದ
ಯಾವಾಗ ಹೊಕ್ಕರು ನಿಲ್ಲದ ಅಚ್ಚರಿ
ಮಾಡುವುದು ವಿಸ್ಮಯ ಸೊಬಗು
ಸಾನ್ವಿಗೆ ಅದೊಂದು ಬಣ್ಣದ ಬೆರಗು